ಮೇಲ್ಬಂಟ ದೈವ
ಉತ್ಸವದ ಸಂದರ್ಭದಲ್ಲಿ ಮೇಲ್ಬಂಟ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಭಕ್ತರು ಇಲ್ಲಿ ಕೋಳಿಯನ್ನು ಹರಕೆಯಾಗಿ ಒಪ್ಪಿಸುತ್ತಾರೆ.
ಬಲಿ ನೀಡಿದ ಕೋಳಿಯನ್ನು ಅಲ್ಲೇ ಪಕ್ಕದ ಗದ್ದೆಯಲ್ಲಿ ಶುಚಿಗೊಳಿಸಿ ತಯಾರು ಮಾಡುತ್ತಾರೆ. ಕೋಳಿ ಕೊಯ್ಯುವ ಮುಹೂರ್ತವನ್ನು ವಿಶ್ವಕರ್ಮರು (ಆಚಾರಿ) ತಮ್ಮ ಉಳಿ ಮತ್ತು ಸುತ್ತಿಗೆಯಿಂದ ಕೋಳಿ ಕೊಯ್ದು ನೆರವೇರಿಸುತ್ತಾರೆ. ಸ್ವಚ್ಛಗೊಳಿಸಿ ಕತ್ತರಿಸಿದ ಮಾಂಸವನ್ನು ದೊಡ್ಡ ಗಾತ್ರದ ಕೊಪ್ಪರಿಗೆಯಲ್ಲಿ ತಯಾರಿಸಲಾಗುತ್ತದೆ. ಕೆಲವು ಬಗೆಯ ತರಕಾರಿ ಪಲ್ಯ ಮತ್ತು ಕುಚ್ಚಿಲಕ್ಕಿ ಅನ್ನ ಕೂಡ ಭಕ್ತರಿಗಾಗಿ ಸಿದ್ಧಪಡಿಸಲಾಗುತ್ತದೆ.
ನಂತರ ಮೊಯ್ಲಿ (ಸ್ಥಾನದ ಅರ್ಚಕರು) ಯವರು ತಮ್ಮ ಮೂಗು ಮತ್ತು ಬಾಯನ್ನು ಶ್ವೇತ ವಸ್ತ್ರದಿಂದ ಮುಚ್ಚಿ ಮೇಲ್ಬಂಟ ಮತ್ತು ಇತರೆ ದೈವ -ಗಣಾದಿಗಳಿಗೆ "ಅಗೆಲ್" ಬಡಿಸುತ್ತಾರೆ. ನಂತರ ಸೇರಿದ ಭಕ್ತರ ಸಮ್ಮುಖದಲ್ಲಿ ಪೂಜೆ ನೆರವೇರುತ್ತದೆ. ನಂತರ ಬಲಿಪಡೆದ ಕೋಳಿಯ ಅಡುಗೆಯನ್ನು ಪ್ರಸಾದವಾಗಿ ಭಕ್ತ ಸಮೂಹಕ್ಕೆ ಸಾಲಾಗಿ ಕೂರಿಸಿ ಬಡಿಸಲಾಗುತ್ತದೆ. ಪೂರ್ತಿ ಕಾರ್ಯ ಮುಗಿಯುವ ಹೊತ್ತಿಗೆ ರಾತ್ರಿ ಕಳೆದು ಮುಂಜಾನೆಯಾಗಿರುತ್ತದೆ.
ಒಂದು ಸಮಾಜ ಹೇಗೆ ಸಹಬಾಳ್ವೆ ನಡೆಸಬಹುದೆಂಬುದಕ್ಕೆ ಈ ವಿಶೇಷವಾದ "ಮೇಲ್ಬಂಟ ಪೂಜೆಯು " ಉತ್ತಮ ನಿದರ್ಶನವಾಗಿದೆ.
ಮೇಲ್ಬಂಟ ದೇವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 'ಸ್ಥಳ ಪುರಾಣ ' ಲೇಖನ ಓದಿರಿ.