ದಕ್ಷಿಣ ಕನ್ನಡ ಮತ್ತು ಉಡುಪಿಯೆಂಬ 'ನಾಗ' ನನ್ನು ಧಾರ್ಮಿಕವಾಗಿ ಆರಾಧಿಸಲ್ಪಡುವ ಈ ಪವಿತ್ರ ಮಣ್ಣಿನಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರ 1600 ದೇವಸ್ಥಾನಗಳಿವೆ. ಬೇರೆ - ಬೇರೆ ದೈವ ಮತ್ತು ದೇವರುಗಳನ್ನು ಆರಾಧಿಸುವ ಈ ಮಣ್ಣಿನಲ್ಲಿ ಕಣಂಜಾರು ಬ್ರಹ್ಮಲಿಂಗೇಶ್ವರನ ಕಥೆಯು ತುಂಬಾ ಪ್ರಾಮುಖ್ಯತೆ ಮತ್ತು ಪಾವಿತ್ರತೆ ಪಡೆದಿದೆ. 'ಕಣಂಜಾರ 'ನ್ನು, 'ಕಣಜಾರು ' ಎಂದೂ ಕರೆಯಬಹುದು.
ವ್ಯಕ್ತಿ ಉಡುಪಿಯಿಂದ ದೇವಸ್ಥಾನಕ್ಕೆ ಬರುವುದಾದರೆ, ಆತ ಉಡುಪಿ - ಹಿರಿಯಡ್ಕ - ಕಾರ್ಕಳ ಮಾರ್ಗವಾಗಿ ಬರಬೇಕು. ಮತ್ತು ಗುಡ್ಡೆಯಂಗಡಿಯಲ್ಲಿ (ಹಿರಿಯಡ್ಕದ ನಂತರ) ಬಲಭಾಗದಲ್ಲಿ ಸಿಗುವ ದ್ವಾರದ ಮೂಲಕ ಕಣಂಜಾರಿಗೆ ಬರಬಹುದು. ದ್ವಾರದಿಂದ ಮೂರು ಕಿ. ಮೀ ದೂರದಲ್ಲಿ ದೇವಸ್ಥಾನವಿದೆ. ಮತ್ತೊಂದು ರಸ್ತೆಯ ಮೂಲಕ ಕೂಡ ದೇವಸ್ಥಾನಕ್ಕೆ ಬರಬಹುದು. ಆತ ಉಡುಪಿ - ಪಳ್ಳಿ - ಬೈಲೂರು - ಕಾರ್ಕಳ ಮಾರ್ಗವಾಗಿ ಬರಬೇಕು. ಕಣಂಜಾರು ಚರ್ಚಿನ ಹತ್ತಿರ ಸಿಗುವ ಎಡಭಾಗದ ದ್ವಾರದ ಮೂಲಕ ಪ್ರವೇಶಿಸಬೇಕು. ಇಲ್ಲಿಂದ ಮೂರು ಕಿ. ಮೀ. ಸಂಚರಿಸಿದರೆ ದೇವಸ್ಥಾನ ಸಿಗುತ್ತದೆ.
ದೇವಸ್ಥಾನದ ದಾರಿ ಮಧ್ಯೆ, ಯಾವುದೇ ಆಧುನೀಕರಣದ ಪ್ರಭಾವಕ್ಕೆ ಒಳಗಾಗದೆ ಇರುವ ಹಸಿರಿನಿಂದ ಕಂಗೊಳಿಸುವ ಪ್ರಕೃತಿ ಹಾಗೂ ಬೆಟ್ಟ- ಗುಡ್ಡಗಳು ಪ್ರಯಾಣಿಕರನ್ನು ಮಂತ್ರಮುಗ್ಧಗೊಳಿಸುತ್ತದೆ. ಇಂತಹ ಸುಂದರವಾದ ಪ್ರಕೃತಿಯ ನಡುವೆ ದೇವಸ್ಥಾನವಿದೆ. ದೇವಸ್ಥಾನಕ್ಕೆ ಪ್ರವೇಶಿಸುತ್ತಿದ್ದಂತೆ , ಸುಮಾರು 850 ವರುಷಗಳ ಹಿಂದಿನ ಶಿಲ್ಪಕಲಾ ಸೌಂದರ್ಯವನ್ನು ಕಾಣಬಹುದು.
ದೇವಸ್ಥಾನವು 'ವಾಸ್ತುಶಾಸ್ತ್ರ' ನಿಯಮ ಮತ್ತು 'ವಿನ್ಯಾಸ' ಹೊಂದಿದೆ. 'ಗರ್ಭಗುಡಿ' ಯನ್ನು 'ಚತುರಾಸ್ರ' ಮತ್ತು 'ಗಜಾಯ ಆಯ' ನಿಯಮದ ಪ್ರಕಾರ ನಿರ್ಮಿಸಲಾಗಿದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಎಲ್ಲಾ ದೇವಸ್ಥಾನಗಳಲ್ಲಿ ದೇವರಿಗೆ 'ಸ್ಥಾನ' ವಿರುತ್ತದೆ. ಹಾಗೆಯೇ, ಇಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ದೇವರು ಪ್ರಧಾನ ದೇವರಾಗಿ ಆರಾಧಿಸಲ್ಪಡುತ್ತಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಶ್ರೀ ವೀರಭದ್ರ, ಶ್ರೀ ಗಣಪತಿ, ಶ್ರೀ ಅನ್ನಪೂರ್ಣೇಶ್ವರಿ, ಮತ್ತು ಶ್ರೀ ಮೇಲ್ಬಂಟ ದೇವರನ್ನು ಆರಾಧಿಸಲಾಗುತ್ತದೆ.